ಆತ್ಮಶುದ್ಧಿ
ದೇಹಸಂಬಂಧದಿಂದ ಆತ್ಮ ಕಲುಷಿತವಾಗಿದೆ ಎಂದು ಕೆಲವರು ಭಾವಿಸುವುದುಂಟು. ಪರಿಶುದ್ಧವಾದ ತನ್ನ ಕಲುಷಿತವಾಗುವುದಕ್ಕೆ ವಾಸನಾ ರೂಪವಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳು ಕಾರಣ. ವಾಸನಾರೂಪವಾದ ಈ ಪ್ರವೃತ್ತಿಗಳನ್ನು ದಮನಮಾಡಿದಾಗ ಆತ್ಮ ಶುದ್ಧವಾಗುತ್ತದೆ. ಅದಕ್ಕೆ ಬಿಡುಗಡೆಯುಂಟಾಗುತ್ತದೆ ಎಂಬುದು ಕೆಲವು ಮತಗಳ ಮೂಲ ನಂಬಿಕೆ. ಈ ಮತಗಳು ಆತ್ಮಶುದ್ಧಿಗೆ ಸಂನ್ಯಾಸ ಅಗತ್ಯವೆಂದು ಭಾವಿಸಿವೆ. ಪಾಶ್ಚಾತ್ಯ ಕ್ಯಾಥೋಲಿಕ್ ಮತದವರೂ ಭಾರತದ ಜೈನರೂ ಸಂನ್ಯಾಸದ ವಿನಾ ಆತ್ಮಶುದ್ಧಿಗೆ ಬೇರೆ ಮಾರ್ಗವಿಲ್ಲವೆಂದು ಭಾವಿಸಿರುತ್ತಾರೆ. ಇದು ಕೇವಲ ನಿವೃತ್ತಿಮಾರ್ಗ. ಇದಕ್ಕೆ ಪ್ರತಿಯಾದ್ದು ಕೇವಲ ಪ್ರವೃತ್ತಿಮಾರ್ಗ. ಭಾರತದಲ್ಲೂ ಪಾಶ್ಚಾತ್ಯ ದೇಶಗಳಲ್ಲೂ ಕೇವಲ ಪ್ರವೃತ್ತಿಮಾರ್ಗವನ್ನು ಎತ್ತಿ ಹಿಡಿದಿರುವವರು ಲೋಕಾಯತರು ಮತ್ತು ಭೌತವಾದಿಗಳು.

ಈ ಎರಡು ಕೇವಲ ಮಾರ್ಗಗಳನ್ನು ಬಿಟ್ಟು ಮಾಧ್ಯಮಿಕ ಮಾರ್ಗವನ್ನು ಅವಲಂಬಿಸಿರುವ ತಾತ್ತ್ವಿಕರು ಭಾರತದಲ್ಲೂ ಪಾಶ್ಚಾತ್ಯ ದೇಶಗಳಲ್ಲೂ ಇದ್ದಾರೆ ಬುದ್ಧನದು ಮಾಧ್ಯಮಿಕ ಮಾರ್ಗ. ಅದು ಧರ್ಮವೊಂದನ್ನೇ ಬಿಡುಗಡೆಯ ಉಪಾಯವೆಂದು ಭಾವಿಸಲಿಲ್ಲ. ಧರ್ಮದಿಂದ ಆತ್ಮದಲ್ಲಿ ಕಶ್ಮಲ ಕೂಡದಂತೆ ತಡೆಯಬಹುದು. ಆದರೆ ಅದೊಂದನ್ನೇ ಅನುಸರಿಸಿದರೆ ಅದು ಶುಷ್ಕಧರ್ಮವಾಗುತ್ತದೆ. ಆತ್ಮಶುದ್ಧಿಯೇ ಜೀವನದ ಅಂತಿಮ ಗುರಿಯಲ್ಲ. ಅದು ಆತ್ಮಶುದ್ಧಿಗೆ ಅಂಗವಾಗದಿದ್ದರೆ ಆತ್ಮ ಬರಡಾಗುತ್ತದೆ. ಮದದಿಂದ ಕೂಡಿದ ದಾನ, ದಯೆಗಳ ಮೂಲಕ ಆಧ್ಯಾತ್ಮಜೀವನ ತುಂಬುಜೀವನವಾಗುತ್ತದೆ. ಆನಂದಮಯ ಜೀವನವಾಗುತ್ತದೆ. ಈ ಜೀವನದಲ್ಲಿ ಆತ್ಮಶುದ್ಧಿಯಾಗಿ ಮುಂದುವರಿದಿದೆ. ಇದು ಪ್ರವೃತ್ತಿ ನಿವೃತ್ತಿಗಳ ಸಮನ್ವಯ ಮಾರ್ಗ. ಉಪನಿಷತ್ತುಗಳ ಮತ್ತು ಭಗವದ್ಗೀತೆಯ ತತ್ತ್ವಗಳು ಇಂಥ ಸಮನ್ವಯ ತತ್ತ್ವಕ್ಕೆ ಉದಾಹರಣೆಗಳು.					
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ